ಕೊಕ್ರೇನ್ ಬಗ್ಗೆ

“ಕೊಖ್ರೇನ್” ಎಂಬುದು ಸಂಶೋಧಕರು, ವೃತ್ತಿಪರರು, ರೋಗಿಗಳು, ಶುಶ್ರೂಷಕರು ಮತ್ತು ಆರೋಗ್ಯದ ವಿಷಯದಲ್ಲಿ ಆಸಕ್ತಿ ಹೊಂದಿದ ಸಾಮಾನ್ಯ ಜನರ ಒಂದು ಜಾಗತಿಕ, ಲಾಭೇತರ ಹಾಗು ಸ್ವತಂತ್ರ ನೆಟ್‌ವರ್ಕ್. ಕೊಖ್ರೇನ್‌ಗೆ ಕೊಡುಗೆ ನೀಡುವವರು – ವ್ಯಾಪಾರೀ ಪ್ರಾಯೋಜಕತ್ವ ಹಾಗು ಇತರ ಸ್ವಹಿತಾಸಕ್ತಿಯ ಘರ್ಷಣೆಗಳಿಲ್ಲದಂತಹ, ವಿಶ್ವಾಸಾರ್ಹ ಮತ್ತು ಎಲ್ಲರಿಗೂ ದೊರೆಯಬಲ್ಲ ಆರೋಗ್ಯ ಮಾಹಿತಿಯನ್ನು ಸಿದ್ಧಪಡಿಸುವಂತಹ 37,000ಕ್ಕೂ ಹೆಚ್ಚು ಮಂದಿ.

ಕೊಖ್ರೇನ್ ಮಾಡುವಂಥದ್ದೇನು?

ಆರೋಗ್ಯದ ಮೇಲೆ ಮಾಡಲಾದ ಸಂಶೋಧನೆಯಿಂದ ದೊರೆತ ಅತ್ಯುತ್ತಮ ರುಜುವಾತನ್ನು ನಾವು ಕಲೆ ಹಾಕುತ್ತೇವೆ ಮತ್ತು ಸಾರಾಂಶವನ್ನು ತಯಾರು ಮಾಡುತ್ತೇವೆ ಹಾಗು ನಂತರ ಅವುಗಳನ್ನು ಕೊಖ್ರೇನ್ ಕ್ರಮಬದ್ಧ ಪುನರ್-ವಿಮರ್ಶೆಯ ರೂಪದಲ್ಲಿ ಪ್ರಕಟಿಸುತ್ತೇವೆ. ಉನ್ನತ ಗುಣಮಟ್ಟವುಳ್ಳ ಹಾಗು ನಂಬಿಕೆಗೆ ಅರ್ಹವಾದ ಮಾಹಿತಿಗಾಗಿ ನಮ್ಮ ಕೆಲಸಕ್ಕೆ ಅಂತಾರಾಷ್ಟ್ರೀಯ ಮಟ್ಟದ ಶ್ರೇಷ್ಠ ಮಾನಕದ ಪ್ರತಿನಿಧಿ ಎಂಬ ಮನ್ನಣೆ ನೀಡಲಾಗಿದೆ. ಚಿಕಿತ್ಸೆಗಳ ವಿಷಯದಲ್ಲಿ ನೀವು ಮಾಹಿತಿಯುಕ್ತ ಆಯ್ಕೆಗಳನ್ನು ಮಾಡುವಲ್ಲಿ ನೆರವಾಗಲೆಂದು ನಾವು ಇದನ್ನು ಮಾಡುತ್ತೇವೆ. ನಾವು ವ್ಯಾಪಾರೀ ಅಥವಾ ಸ್ವಹಿತಾಸಕ್ತಿಯುಳ್ಳ ಹಣಸಹಾಯವನ್ನು ಸ್ವೀಕರಿಸುವುದಿಲ್ಲ. ವ್ಯಾಪಾರೀ ಆಸಕ್ತಿ ಹಾಗು ಹಣಕಾಸಿಗೆ ಸಂಬಂಧಿಸಿದ ಯಾವುದೇ ವಿಷಯಗಳ ಒತ್ತಾಯಗಳಿಲ್ಲದೇ, ಮುಕ್ತವಾಗಿ ಕೆಲಸ ಮಾಡುವುದು ಹಾಗು ಆ ಮೂಲಕ ದಾಖಲೆಬದ್ಧ ಹಾಗು ನಂಬಿಕಾರ್ಹ ಮಾಹಿತಿಯನ್ನು ತಯಾರಿಸುವುದು ನಮಗೆ ಅತ್ಯಂತ ಮುಖ್ಯವಾದುದು.   

ನಾವು ಇದನ್ನು ಮಾಡುವುದೇಕೆ?

ಆರೋಗ್ಯದ ರುಜುವಾತನ್ನು ಪಡೆಯುವ ಸೌಲಭ್ಯ ಹೆಚ್ಚಿದಂತೆಲ್ಲಾ, ಜಟಿಲವಾದ ವಿಷಯಗಳನ್ನು ತಪ್ಪಾಗಿ ಅರ್ಥೈಸುವ ಅಪಾಯವೂ ಹೆಚ್ಚುತ್ತದೆ. ಅಷ್ಟೇ ಅಲ್ಲದೆ, ಆರೋಗ್ಯಕ್ಕೆ ತೊಂದರೆ ಉಂಟು ಮಾಡುತ್ತಿರುವ ವಿಷಯಗಳ ಬಗ್ಗೆ ಯಾವುದೇ ಒಬ್ಬ ವ್ಯಕ್ತಿ ಸಂಪೂರ್ಣವಾದ ಹಾಗು ಸಮಗ್ರ ಮಾಹಿತಿಯನ್ನು ಪಡೆಯುವ ಸಾಧ್ಯತೆಯು ಕಡಿಮೆಯಾಗುತ್ತದೆ. ಹೀಗಾಗಿ, ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳುವುದನ್ನು ಬೆಂಬಲಿಸುವ ನಿಟ್ಟಿನಲ್ಲಿ ಎಲ್ಲರಿಗೂ ದೊರೆಯಬಲ್ಲ, ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುವುದು ನಮ್ಮ ಜಾಗತಿಕ ಆರೋಗ್ಯ ಧ್ಯೇಯ.

ಕೊಖ್ರೇನ್ ಯಾರಿಗಾಗಿ?

ಆರೋಗ್ಯಸಂಬಂಧಿ ನಿರ್ಧಾರಗಳನ್ನು ಮಾಡುವ ನಿಟ್ಟಿನಲ್ಲಿ ಉನ್ನತ  ಗುಣಮಟ್ಟದ ಮಾಹಿತಿಯನ್ನು ಪಡೆಯಲು ಯಾರೆಲ್ಲಾ ಆಸಕ್ತರಾಗಿದ್ದಾರೋ ಅವರೆಲ್ಲರಿಗಾಗಿದೆ ಕೊಖ್ರೇನ್. ನೀವೊಬ್ಬ ವೈದ್ಯರು ಅಥವಾ ನರ್ಸ್, ಅಥವಾ ರೋಗಿ, ಶುಶ್ರೂಷಕರು, ಸಂಶೋಧಕರು ಅಥವಾ ಹಣಪೂರೈಕೆದಾರ ಅಥವಾ ಬೇರೆ ಏನೇ ಆಗಿರಿ, ನಿಮ್ಮ ಆರೋಗ್ಯಕಾಳಜಿಗೆ ಸಂಬಂಧಿಸಿದ ಜ್ಞಾನ ಮತ್ತು ನಿರ್ಧಾರ ಮಾಡುವಿಕೆಯನ್ನು ಉತ್ತಮಗೊಳಿಸುವ ಒಂದು ಶಕ್ತಿಯುತ ಸಾಧನವನ್ನು ನಿಮಗೆ ಕೊಖ್ರೇನ್ ರುಜುವಾತು ಒದಗಿಸುತ್ತದೆ. ಪ್ರತಿಯೊಬ್ಬರೂ ನಿರ್ವಹಿಸಬಹುದಾದ ಒಂದು ಪಾತ್ರವಿರುತ್ತದೆ. ನಮ್ಮ ತಂಡದಲ್ಲಿ ತೊಡಗಿಕೊಳ್ಳುವುದು ಹೇಗೆ ಎಂದು ತಿಳಿಯಬಯಸಿದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.